ಆಕಳ ತಳಿಗಳು

ಸಾಮಾನ್ಯ ಬಳಕೆಯಲ್ಲಿದ್ದರೂ ಈ ಪದದ ಖಚಿತ ಅರ್ಥ ಹೇಳುವುದು ಸುಲಭವಲ್ಲ. ಒಂದೇ ತೆರನ, ಇಲ್ಲವೇ ಅದನ್ನು ಬಹುವಾಗಿ ಹೋಲುವ, ಬಹಳ ಕಾಲದಿಂದಲೂ ತಳಿ ಇಳಿಸಿದ, ಅದರ ಕರುಗಳಲ್ಲೂ ತೋರುವ ತಲೆಮಾರಿನ ಲಕ್ಷಣಗಳಿರುವ ಒಂದು ಗೊತ್ತಾದ ಮಾದರಿಯ ಆಕಳಿಗೆ ಹೇಳುವುದು ಸಾಮಾನ್ಯ. ಆದರೆ ಎಷ್ಟೊ ಹಿಂದಿನ ಕಾಲದಿಂದ ಬೆಳೆಸಿದ ತಳಿಗಳಲ್ಲೂ ಇದ್ದಕ್ಕಿದ್ದ ಹಾಗೆ ಆ ತೆರನ ಗೊತ್ತಾದ ಲಕ್ಷಣಗಳು ಇರದವೂ ಹುಟ್ಟುವುದು ಅಪೂರ್ವವಲ್ಲ. ಅಂಥವನ್ನು ತೆಗೆದು ಹಾಕಿದರೆ ತೀರಿತು, ತಳಿಗಳ ಚೊಕ್ಕತೆಗೆ ಊನವಿಲ್ಲ. ತಾಯಿಯಂತೆ ಮಗು ಎಂಬಂತೆ, ತಲತಲಾಂತರಗಳಿಂದಲೂ ತಳಿಕಾರರು ಒಳ್ಳೆಯ ಅಚ್ಚತಳಿಗಳನ್ನು ಬೆಳಸಿ ಉಳಿಸಿಕೊಂಡು ಬಂದಿದ್ದಾರೆ.

   	ಸಾಕಿದ ಪ್ರಾಣಿಗಳಲ್ಲಿ ಯಾವೊಂದು ಗುಣವು ವಿಶೇಷವಾಗಿರದೆ ಸಾಧಾರಣವಾಗಿರುತ್ತದೆ. ತನಗೆ ಬೇಕೆನಿಸಿದ ಹೆಚ್ಚಿನ ಗುಣಲಕ್ಷಣಗಳು ಇರುವಂತೆ ಬೆಳೆಯಲು ತಳಿಯೆತ್ತುವುದು ಸಾಕುವವನ ಕೆಲಸ. ಹೀಗೆ ತಳಿಯೆತ್ತಿ ಸಾಕಿಯೇ ಒಂದೊಂದು ಬಳಕೆಗೂ ಒಂದೊಂದು ವಿಶೇಷವಾಗಿ ಒದಗಿ ನಾಗರಿಕರ ಮನವೊಲಿಸುವ ಹಲವು ತಳಿಗಳು ಬೆಳೆದಿವೆ. ಒಂದೇ ಪ್ರಾಣಿಯಿಂದ ಎಲ್ಲ ತೆರನ ಗುಣಗಳನ್ನು ಪಡೆಯಬೇಕೆಂದರೆ ತಳಿ ಮುಂದುವರಿಯದು.
 
ಕೆಲಸದ ರಾಸುಗಳೇ ಒಂದು ಬಗೆ, ಹೈನಿಕ ಆಕಳೇ ಬೇರೆ, ಮಾಂಸವೇ ಬೇರೆ, ಒಂದೊಂದರ ಮೈಕಟ್ಟೂ ಬೇರೆಯೆ. ಹೈನಿನ ತಳಿಯ ಆಕಳ ಮೈಯನ್ನು ಮೇಲಿನಿಂದ ನೋಡಿದರೆ, ಬೆನ್ನಿಂದ ಹೊಟ್ಟೆ ಕಡೆಗೂ ಹಿಂಬದಿಯಿಂದ ಮುಂದಕ್ಕೂ ಸಣ್ಣಗಾಗುತ್ತ ಬೆಣೆಯಾಕಾರದಲ್ಲಿ ಇರುವುದು. ತೆಳ್ಳನೆಯ ಮೈಯಲ್ಲಿ ಸ್ನಾಯುಗಳು ತುಂಬಿಕೊಂಡು, ಕೊಬ್ಬು ಹೆಚ್ಚಿರದೆ ಇರುತ್ತವೆ. ಆದರೆ ಮಾಂಸದ ಆಕಳ ಮೈಕಟ್ಟು ಚಚ್ಚೌಕನೆಯ ಪೆಟ್ಟಿಗೆಯಂತೆ ಕೊಬ್ಬಿ ತುಂಬಿಕೊಂಡಿರುವುದು.
ಒಳ್ಳೆಯ ತಳಿಯಿಂದ ಆಕಳು ಬೇಗನೆ ಬೆದೆಗೆ ಬರುತ್ತವೆ. ಹೈನಿಕ ತಳಿ ಆಕಳು ಈಗ 24-26 ಮಾಸಗಳಿಗೆಲ್ಲ ಮೊದಲ ಕರು ಹಾಕುತ್ತವೆ. ಭಾರತದವು 28-30 ಮಾಸಗಳಲ್ಲೇ ಬೆದೆಗೆ ಬರುತ್ತವೆ. ಎಲ್ಲಕ್ಕೂ ಹೆಚ್ಚಿನ ಸಾಧನೆ ಹೈನಿನ ತಳಿಗಳದು. ಸಾಕಿದವನಿಗೆ ಬಹಳ ಹಾಲನ್ನು ಅದರಲ್ಲಿ ಹೆಚ್ಚು ಬೆಣ್ಣೆಯನ್ನೂ ಕೊಡುವ ತಳಿಗಳೆದ್ದಿವೆ. ಹಾಲ್‍ಸ್ಟೀನ್ ಆಕಳೆಂದರೆ ಹಾಲು ಸರಬರಾಜಿನ ಯಂತ್ರ ಎನ್ನುವಂತಿದೆ. ಈ ಹಸು ದಿನಕ್ಕೆ 35 - 37 ಸೇರು ಹಾಲು ಕೊಡಬಲ್ಲದು. ಮುಂದುವರಿದ ನಾಡುಗಳಲ್ಲಿ ಇದರ ಏಳಿಗೆ ಅಗಾಧವಾಗಿದೆ. ತಲೆಮಾರುಗಳಲ್ಲಿ ಲಕ್ಷಣಗಳು ಸಾಗುವ ಕ್ರಮವನ್ನು ಗ್ರಿಗೋರ್ ಮೆಂಡೆಲ್ ಈಚೆಗೆ ವಿವರಿಸಿದ್ದಾರೆ.

ಅಚ್ಚ ತಳಿ ಬೆಳೆವಣಿಗೆ: ಅನೇಕ ಆಕಳ ತಳಿಗಳೂ ಉಪತಳಿಗಳೂ ಪ್ರಪಂಚದಲ್ಲಿ ಎಲ್ಲೆಲ್ಲೂ ಪ್ರಸಿದ್ದವಾಗಿವೆ. ಯುರೋಪದಲ್ಲೇ 40-50 ವಿಶಿಷ್ಟವಾದ ತಳಿಗಳಿವೆ. ಇಂಗ್ಲೆಂಡು ತೌರಾದ 11 ತಳಿಗಳು ಹೊರದೇಶಗಳಿಗೂ ಹೋಗಿವೆ. ಇಂಗ್ಲೆಂಡಿನಲ್ಲಿ ಹೀಗೆ ಆರಿಸಿದ ತಳಿಗಳ ಬೆಳವಣಿಗೆಯನ್ನು ಜಾರಿಗೆ ತಂದ ರಾಬರ್ಟ ಬೇಕ್‍ವೆಲ್ (1770) ಚೆನ್ನಾದ ಹೊಸ ತಳಿಗಳನ್ನು ಸಾಕಿದಲ್ಲದೆ, ಅವುಗಳ ಪೀಳಿಗೆಯನ್ನು ಪಟ್ಟಿಗಳಲ್ಲಿ ಬರೆದಿಡುತ್ತ ಬಂದ. ಇತರರು ಕೆಲವು ಅಚ್ಚ ತಳಿಗಳನ್ನು ಹೀಗೆ ಏಳಿಗೆಗೆ ತಂದರು. ಇವರ ವಿಧಾನಗಳೇ ಈಗ ಪ್ರಪಂಚದಲ್ಲಿ ಜಾರಿಯಲ್ಲಿವೆ. ಅಚ್ಚ ತಳಿಗಳಿಗಾಗಿ ಬೇಡಿಕೆಗಳು ಹೆಚ್ಚಿ ಆಯಾ ದೇಶದ ತಳಿಗಳೂ ಉತ್ತಮಗೊಂಡವು. 

ಇಂಗ್ಲೆಂಡಿನಲ್ಲಿ ತಳಿಗಳನ್ನು ಬರೆದಿಡುವ ದಾಖಲೆಗಳಲ್ಲಿ ತಳಿಗಳ ಕೆಲವೇ ಗೊತ್ತಾದ ಲಕ್ಷಣಗಳಿರುವ ಎಲ್ಲ ಆಕಳನ್ನೂ ಸೇರಿಸಿಕೊಳ್ಳುತ್ತಿದ್ದರು. ಅಮೇರಿಕದಲ್ಲಿ ಹೀಗಿರಲಿಲ್ಲ. ಆಕಳು ಸಾಕುವವರು ಯಾವಾಗಲು ತಳಿಗಳು ಇನ್ನೂ ಚೆನ್ನಾಗುವಂತೆ ಯತ್ನಿಸುತ್ತಿರುವರು. ಒಂದು ಅಚ್ಚ ತಳಿ ಪ್ರಾಣಿ ಚೆನ್ನಾಗಿದ್ದರೆ ಆ ತಳಿ ಇನ್ನೂ ಉತ್ತಮವಾಗಲೂ ಅದೂ ಒಂದು ಪಾತ್ರ ವಹಿಸುತ್ತದೆ. ಒಂದು ತಳಿ ಚೆನ್ನಾಗಿದೆ ಎನ್ನಲು ಅದರ ಕರುಗಳು ಅಷ್ಟೇ ಚೆನ್ನಾಗಿ ಬರುವುದೇ ಮುಖ್ಯ ಕಾರಣ. ದಾಖಲೆಯಾದ ತಳಿಗಳಲ್ಲಿ ಕರುವಿಗಾಗಲಿ ಮಾಂಸಕ್ಕಾಗಲಿ ತಕ್ಕನಾದವನೆಂದು ತಿಳಿಯಲು ಹಲವಾರು ಪರೀಕ್ಷೆಗಳಿವೆ. 

ಕೇವಲ ಕಣ್ಣರಿಕೆಯ ಅನುಭವದಿಂದ ತಳಿಗಳ ಬೆಳವಣಿಗೆಗೆ ನಿರ್ಣಯಕಲೆಯಾಗಿದ್ದುದು ಈಚೀಚೆಗೆ ಮೆಂಡೆಲ್ಲನ ತಳಿಸೂತ್ರ ಅಲ್ಲದೆ ಜನಸಂದಣಿಯ ತಳಿಶಾಸ್ತ್ರದ ತತ್ವಗಳ ವಿಜ್ಞಾನವಾಗುತ್ತಿದೆ.

ಮೊದಮೊದಲು ತಳಿಯೆಬ್ಬಿಸಿದವರು ಇರಿಸಿಕೊಂಡಿದ್ದ ಗೊತ್ತಾದ ಲಕ್ಷಣಗಳ ಹೋರಿ ಮಾದರಿಗಳೂ ಆಮೇಲೆ ತಳಿಯೆಬ್ಬಿಸಲು ಸರಿಯಾದ ಆಕಳನ್ನೆ ಆರಿಸಿಕೊಂಡಿದ್ದೂ ಇಂದಿನ ತಳಿಗಳಿಗೆ ಮುಖ್ಯ ಕಾರಣ. ಪ್ರಪಂಚದಲ್ಲಿ ಸಾಮಾನ್ಯ ಆಕಳುಗಳೆಲ್ಲ ಬರುಬರುತ್ತ ಉತ್ತಮವಾಗಲು ಕಾರಣ. ಅಚ್ಚ ತಳಿಯ ಹೋರಿಗಳನ್ನು ಸಾಮಾನ್ಯ ಹಸುಗಳೊಂದಿಗೆ ಜೊತೆಗೂಡಿಸಿದ್ದು. ಇಲ್ಲೂ ಆಕಳ ಆಯ್ಕೆ ಚೆನ್ನಾಗಿದ್ದು ಒಳ್ಳೆಯ ತಳಿಯ ಹೋರಿ ಸಿಕ್ಕಿದರೆ ಉತ್ತಮ ಫಲ ದೊರೆವುದು.

ಒಂದೊಂದು ತಲೆಮಾರಿಗೂ ಹಲವಾರು ವರ್ಷಗಳು ಹಿಡಿಯುವುದರಿಂದಲೂ ಆಕಳ ಈತವೂ ಕಡಿಮೆ ಆಗುವುದರಿಂದಲೂ ಆಕಳ ತಳಿ ಉತ್ತಮಗೊಳ್ಳಲು ಬಹುಮಟ್ಟಿಗೆ ಅತ್ಯುತ್ತಮ ಹೋರಿಗಳನ್ನು ಆರಿಸಲೇಬೇಕು. ಕೃತಕ ಗರ್ಭಾದಾನ(ಆರ್ಟಿಫಿಷಿಯಲ್ ಇನ್ಸೆಮಿನೇಷನ್) ಜಾರಿಗೆ ಬಂದು ಎಲ್ಲೋ ಒಂದೆಡೆ ಇಟ್ಟಿರುವ ಒಂದೇ ಹೋರಿಯಿಂದ ನೂರಾರು ಆಕಳು ಫಲಿಸಿ ಬೇಗನೆ ಉತ್ತಮವಾಗುತ್ತವೆ. ಸಾಮಾನ್ಯವಾಗಿ ಒಂದು ಹೋರಿ ಒಂದು ವರ್ಷದಲ್ಲಿ 30-40 ಆಕಳಿಗೆ ಗರ್ಭಾದಾನ ಮಾಡಿದರೆ, ಕೃತಕ ವಿಧಾನದಲ್ಲಿ ಸರಾಸರಿ ಸುಮಾರು 2,000 ಆಕಳಿಗೆ ಮಾಡಬಹುದು. ಅಂಥ ಬೀಜದ ಹೋರಿಯ ತಳಿ ಎಷ್ಟು ಚೆನ್ನಾಗಿ ಇರಬೇಕೆಂದು ಇದರಿಂದ ಗೊತ್ತಾಗುವದು. ಸರಿಯಾದ ಹೋರಿಯನ್ನು ಆರಿಸುವಾಗ ಹಲವಾರು ಪರೀಕ್ಷೆಗಳನ್ನು ಮಾಡಬಹುದು. ಕರಾವಿಗಾಗಿ ಆಕಳನ್ನು ಪಡೆವಾಗ, ಸರಾಸರಿಯಾಗಿ ಎಷ್ಟು ಬಾರಿ ಹೆಣ್ಣುಗರುಗಳು ಇಳಿಯುತ್ತವೆಂದು ಲೆಕ್ಕ ಹಾಕುವುದು ಒಂದು ವಿಧಾನ. ಆದರೆ ದನದ ಮಾಂಸಕ್ಕಾಗಿ ಪಡೆವಾಗ ಬಲು ದುಬಾರಿ ಪರೀಕ್ಷೆಗಳಾಗಬೇಕು. ಕೃತಕ ಗರ್ಭಾದಾನದಲ್ಲಿ ಹೋರಿಯ ತಳಿಗಿಂತಲೂ ಕರಾವೂ ದೊರಕುವ ಮಾಂಸವೂ ಮುಖ್ಯ.

ಆಕಳಿಗೆ ತೀರ ಹತ್ತಿರದ ಸಂಬಂಧದ ಹೋರಿ ಕೊಡಿಸಿದಾಗ ಕೆಲವೇಳೆ ಬಲು ಒಳ್ಳೆಯ ತಳಿಗಳು ಬಂದರೆ, ಹಲವೇಳೆ ಕೆಡುವುದುಂಟು. ಉತ್ತಮ ತಳಿಗಳನ್ನು ಬಳಸಿ ಬೇಕ್‍ವೆಲ್ ಒಳ್ಳೆಯ ಫಲ ಪಡೆದ; ಅದೇ ಬೇಟ್ಸ್‍ನಿಂದ ಆಗಲಿಲ್ಲ. ಈಗಣ ಶತಮಾನದಲ್ಲಿ ಅದರ ಸಮನಾದ ಇಲ್ಲವೇ ಇನ್ನೂ ಯೋಗ್ಯವಾದ್ದನ್ನು ಪಡೆವುದು ಕಷ್ಟವಾಗುವಷ್ಟು ಇಲ್ಲವೇ ಅಸಾಧ್ಯವಾಗುವಷ್ಟು ಉತ್ತಮತಮ ಹೋರಿಯನ್ನು ಬಳಸಿ ಈ ತಳಿ ವಿಧಾನವನ್ನು ತಳಿಗಾರರು ಬಳಸುತ್ತಿರುವರು. ಆಕಳು, ಹೋರಿ ಎರಡರಲ್ಲೂ ಬಲು ಒಳ್ಳೆಯ ಗುಣಲಕ್ಷಣಗಳು ಇದ್ದರೆ ಮಾತ್ರ ಇದನ್ನು ನಡೆಸಿಕೊಂಡು ಬರಬಹುದು. ಚೆನ್ನಾಗಿ ಗೊತ್ತಿರುವ ಎರಡೋ ಹೆಚ್ಚಿಗೋ ಜಾತಿಗಳನ್ನು ಅಡ್ಡ ಹಾರಿಸಿ ಹೊಸ ತಳಿಗಳನ್ನು ಪಡೆದುದುಂಟು. ಇಲ್ಲಿ ಒಂದೊಂದು ಜಾತಿಯವರ ಒಳ್ಳೆಯ ಗುಣಲಕ್ಷಣಗಳನ್ನೂ ಕೂಡಿಸಿದ ತಳಿಯನ್ನು ಪಡೆವುದು ಇದರ ಮುಖ್ಯ ಉದ್ದೇಶ. ಆದರೆ ಹೀಗೆ ಮಾಡಲು ವರ್ಷಗಳೇ ಹಿಡಿವುದು. ಅಲ್ಲದೆ ಆಕಳ ದೊಡ್ಡ ಮಂದೆಯನ್ನೇ ಸಾಕಿರಬೇಕು. ಪೋಲ್ಡ್ ಹೆರಿಫರ್ಡ, ಪೋಲ್ಡ್ ಷಾರ್ಟಹಾರ್ನ್, ಇತ್ಯಾದಿ ತಳಿಗಳನ್ನು ಪಡೆವಾಗ ಈ ವಿಧಾನವನ್ನೇ ಅನುಸರಿಸಿದೆ. ಮಾಂಸಕ್ಕಾಗಿ ಮಾರಾಟವಾಗುವವನ್ನೂ ಕರಾವಿನ ಆಕಳನ್ನೂ ಪಡೆಯಲು, ಕೆಲವೇಳೆ ಅಚ್ಚ ತಳಿಯ ಹೋರಿಯನ್ನೇ ಇನ್ನೊಂದು ಅಚ್ಚ ತಳಿಯ ಆಕಳಿಗೆ ಕೊಡಿಸುವುದುಂಟು. ಇಂಥ ಜೋಡಿಯಿಂದ ಬಂದ ಅಡ್ಡ ತಳಿಗಳು ಬಲಶಾಲಿಗಳಾಗಿರುತ್ತವೆ. ಒಟ್ಟಿನಲ್ಲಿ ಅಚ್ಚ ತಳಿಯ ಹೋರಿ, ಆಕಳಿಗಿಂತಲೂ ಅಡ್ಡತಳಿಯವು ಇನ್ನೂ ಬಲವಾದವು.
ಬೇರೆ ದೇಶಗಳವು: ಯೂರೋಪಿನಲ್ಲಿ ಹಿಂದಿನ ಕಾಲದಿಂದಲೂ ಬೆಳೆಸುತ್ತಿರುವ ತಳಿಗಳ ಲಕ್ಷಣಗಳು ಖಚಿತವಾಗಿ ಹೆಸರಾಗಿದೆ. ಫ್ರಾನ್ಸಿನ ಚಾರೋಲೇ, ನಾರ್ಮಂಡಿ ಬೆಲ್ಜಿಯಮ್ಮಿನ ಹಾಲ್‍ಸ್ಟೀನುಗಳು ಮುಂತಾದವು. ಆದರೆ ಮಾಂಸಕ್ಕಾಗಿ ಸಾಕುವ ತಳಿಗಳ ಮೇಲೆ ಬಲು ಪ್ರಭಾವ ಬೀರುವ ಬ್ರಿಟನಿನವು ಇವಕ್ಕಿಂತ ಮುಖ್ಯವಾದವು. ತಳಿಗಳನ್ನೂ ಮಾಂಸಕ್ಕಾಗೋ ಕರಾವಿಗಾಗೋ ಬೆಳಸಬಹುದು. ಮಾಂಸಕ್ಕಾಗಿ ಸಾಕಿದವಲ್ಲಿ, ಷಾರ್ಟಹಾರ್ನ, ಹೆರಿಫರ್ಡ, ಅಂಗಸ್, ಡೆವಾನ್, ಗ್ಯಾಲೋವೆ, ರೆಡ್‍ಪೋರ್, ಆಫ್ರಿಕಾಂಡರ್, ಭಾರತದ ಬ್ರಾಹ್ಮಣ ತಳಿಗಳೂ ಇವುಗಳ ಅಡ್ಡ ತಳಿಗಳೂ ಹೆಸರಾಗಿವೆ. ಕರಾವಿಗಾಗಿ ಸಾಕಿದವಲ್ಲಿ ಹಾಲ್‍ಸ್ಟೀನ್-ಫ್ರೀಸಿಯನ್,ಜರ್ಸಿ, ಗ್ವೆರ್ನಸಿ, ಬ್ರೌನ್‍ಸ್ವಿಸ್, ಬ್ರಿಟನ್ನದೇ ಆದ ಅರ್ಯಪೈರ್-ಇವು ಲೋಕಪ್ರಸಿದ್ಧ.

ಭಾರತದವು: ಭಾರತದಲ್ಲೂ ಅವುಗಳ ಹುಟ್ಟಿನಲ್ಲೇ ಅನೇಕ ಗೊತ್ತಾದ ಗುಣಲಕ್ಷಣಗಳಿಂದ ಗುರುತು ಸಿಗುವ, ಆಕಳ ತಳಿಗಳು ಹಲವಾರಿವೆ. ಹುಟ್ಟುಗುಣಗಳಲ್ಲಿ ಈ ತಳಿಗಳು ಯೂರೋಪಿನವಕ್ಕಿಂತ ಏನು ಕಡಿಮೆಯಿಲ್ಲ. ಕೆಲವು ಪಂಗಡದ ಜನ ಕೆಲವು ಸೊಗಸಾದ ತಳಿಗಳನ್ನು ಸಾಕುತ್ತ ಬಂದಿರುವುದರಿಂದ ಇನ್ನೂ ಹಲವಾರು ಆಕಳ ಸಾಕಣಿಕೆಯನ್ನೇ ಹುಟ್ಟುಕೆಲಸವಾಗಿಟ್ಟುಕೊಂಡು ಚೆನ್ನಾಗಿ, ಒಳ್ಳೆಯ ತಳಿಯನ್ನೇ ಬೆಳೆಸುತ್ತಿರುವುದರಿಂದ ಇದು ಸಾಧ್ಯವಾಗಿದೆ. ಭಾರತದಲ್ಲಿ ನಾಲ್ಕು ಮೂಲ ಪಂಗಡಗಳಿವೆ: ಉತ್ತರದ ದೊಡ್ಡ ಬಿಳಿಯ ಆಕಳು; ತಲೆ ಕೊಂಬುಗಳ ವಿಶೇಷ ಲಕ್ಷಣಗಳಿರುವ ದಕ್ಷಿಣದ ಮೈಸೂರಿನವು; ಪಡುವಣದ ಕಾಠೇವಾಡದ ಗಿರ್ ದನಗಳು; ಭಾರತದಲ್ಲಿ ಎಲ್ಲೆಲ್ಲೂ ಗುಡ್ಡಗಾಡುಗಳಲ್ಲಿ ಇರುವ ಕಪ್ಪು, ಕೆಂಪು, ಬೆರಕೆ ಬಣ್ಣದ ಸಣ್ಣ ದೇಹದವು.

ಮುಂದುವರಿದ ದೇಶಗಳಲ್ಲಿ ಇದ್ದಂತೆ ಭಾರತದಲ್ಲೂ ತಳಿ ಎನ್ನಿಸಿಕೊಳ್ಳುವುವು ನಿಖರವಾಗಿಲ್ಲದಿದ್ದರೂ ಕೆಲವು ಮುಖ್ಯ ತಳಿಗಳ ಲಕ್ಷಣಗಳನ್ನು ಗುರುತಿಸಬಹುದು. ಇಲ್ಲಿನ ದನಗಳ ಬೇರೆ ಬೇರೆ ಬಗೆಗಳ ಮೂಲ ಹೊರಗಿಂದ ದಾಳಿಯಿಟ್ಟು ಜನರ ವಲಸೆಗೆ ಸಂಬಂಧಿಸಿದೆ. ಅವರೊಂದಿಗೆ ಬಂದ ರಾಸುಗಳ ಮಂದೆಗಳು ನಾಡಿನ ಆಗಿನ ತಳಿಗಳೊಂದಿಗೆ ಬೆರೆತು ಹೊಸ ತಳಿಗಳು ಎದ್ದಿರಬೇಕು.

ಉತ್ತರ ಭಾರತದ ಬೂದು, ಬಿಳಿ ಬಣ್ಣದ ರಾಸುಗಳ ಪಂಗಡದಲ್ಲಿ ಎರಡು ತಂಡಗಳು ಎದ್ದು ಕಾಣುತ್ತವೆ. ಪಡುವಲದ ಕಾಂಕ್ರೇಜಿ ದನ ಒಂದು. ಇದರ ಹಣೆ ಅಗಲ, ಕೊಂಬು ದಪ್ಪ. ಆರ್ಯರು ವಲಸೆ ಬಂದರೆಂಬ ಪಡುವಲದ ಕರಾವಳಿಯ ಮೂಲಕ ಸಿಂಧು, ಗುಜರಾತ್, ರಾಜಪುಟಾಣಗಳಲ್ಲಿ ಈ ತಳಿಯೇ ಹೆಚ್ಚಾಗಿ ಕಾಣುವುದು. ಎರಡನೆಯ ತಂಡದಲ್ಲಿ ಬಿಳಿಯ ಬಣ್ಣದ, ಅಗಲವಿರದ, ಹಣೆಯ, ಗಿಡ್ಡ ಕೊಂಬಿನ, ಭಗನಾರಿ, ಹರಿಯಾನ, ರೂತ್, ಗಾವ್ಲೊ, ಓಂಗೋಲ್ ರಾಸುಗಳನ್ನು ಚೆನ್ನಾಗಿ ಗುರುತಿಸಬಹುದು. ಹಾಗೆಯೇ ಮಧ್ಯಪ್ರದೇಶದ, ದಕ್ಷಿಣ ಭಾರತಗಳಲ್ಲೂ ಇವು ಅಲ್ಲಲ್ಲಿ ಕಾಣಬರುತ್ತವೆ. ಇವೆರಡು ತಂಡಗಳ ತಳಿಗಳ ಬೆರಕೆ ಅಪೂರ್ವವಲ್ಲ. ರಾಜಪುಟಾಣದ ಮಾಳ್ವಿ ದನಗಳು ಕಾಂಕ್ರೇಜಿಗಳನ್ನು ಹೋಲುತ್ತವೆ. ಬಿಳಿಯ ರಾಸುಗಳಿಗೆ ಕಾಲುಕಂಬ ಎತ್ತರ, ಮೈಕಟ್ಟು ಕಿರಿದು, ತೂಕವು ಅಷ್ಟಿಲ್ಲ. ಬೂದು ಆಕಳು ತೂಕದವು, ಚೆನ್ನಾಗಿ ಕರೆಯುತ್ತವೆ. ಇವೆರಡರ ಅಡ್ಡ ತಳಿಗಳೂ ಚೆನ್ನಾಗಿ ಹಾಲು ಕೊಡುತ್ತವೆ. ಹರಿಯಾನ, ಹಳ್ಳಿಕಾರ್, ಓಂಗೋಲ್ ಆಕಳು ಇಂಥವು. ಇವುಗಳೊಂದಿಗೆ ಕೃಷ್ಣಾಕಣಿವೆಯ ತಳಿ, ಕಾಂಗ್ಯಾಮ್ (ಕೊಯಮತ್ತೂರು ತಳಿ), ಡೋಸಿ (ಹೈದರಾಬಾದ್ ತಳಿ)-ಇವೂ ಹೈನಿಗೆ ಪ್ರಸಿದ್ಧವಾಗಿವೆ.

ಕೊಂಬುಗಳ ತಲೆಗಳ ವಿಶಿಷ್ಟ ಹೆಗ್ಗುರುತಿನವು ಮೈಸೂರು ತಳಿ. ಹಳ್ಳಿಕಾರ್, ಅಮೃತಮಹಲ್ ರಾಸುಗಳಲ್ಲಿ ಇದರ ಲಕ್ಷಣಗಳಿವೆ. ಆಂಧ್ರ, ಮದರಾಸು, ಉತ್ತರ ಕರ್ನಾಟಕಗಳ ರಾಸುಗಳೂ ಅಷ್ಟೆ.

ಕಾಠೇವಾಡದ ದಕ್ಷಣದವು ಗಿರ್ ತಳಿದನಗಳು. ಇವು ಕಛ್‍ನಿಂದ ಆಂಧ್ರದ ತನಕ ಹರಡಿಕೊಂಡಿವೆ. ಭಾರತದ ಎಲ್ಲೆಡೆಗಳಲ್ಲೂ ಇರುವ ಸಣ್ಣ ರಾಸುಗಳ ಬಣ್ಣ ಮೈಕಟ್ಟು ಹೀಗೆ ಅನ್ನುವಂತಿಲ್ಲ ಅಂತೂ ಒಂದೇ ತಳಿಯ ಲಕ್ಷಣಗಳು ಅಷ್ಟಾಗಿಲ್ಲ. 

   	ಅಮೃತಮಹಲ್: ಮೈಸೂರು ಸರಕಾರದ ನೆರವಿನಿಂದ ಶಾಸ್ತ್ರೀಯವಾಗಿ ಬೆಳಸಿ ಕಾಪಾಡಿರುವ ಹೆಸರಾದ ತಳಿಯಿದು. ಈ ತಳಿಯ ಹೋರಿಯನ್ನು ನಾಡಿನಲ್ಲಿ ಹಂಚಲಾಗಿದೆ. ಆಕಳು ಹೆಚ್ಚಾಗಿ ಹಾಲು ಕರೆಯವು. ಆದರೆ ಎತ್ತುಗಳು ಚುರುಕು, ರೋಷದವು. ದುಡಿವುದಲ್ಲದೆ, ಕಷ್ಟವನ್ನೂ ತಡೆಯಬಲ್ಲವು. 

   	ಹಳ್ಳಿಕಾರ್: ಇದು ಸಾಧುವಾದ ಆಕಳು. ಈ ಮೈಸೂರು ತಳಿ ಕರಾವಿಗೆ ಹೆಸರಾಗಿದೆ. ಕರಾವಿನ 269 ದಿನಗಳಲ್ಲಿ 4,180 ಪೌಂಡು ಹಾಲು ಕೊಟ್ಟಿದೆ. ಜೀವಾತುಗಳಿರುವ ಇದರ ಹಾಲು ಹಳದಿಯಾಗಿರುವುದು ಇದರ ಹೆಚ್ಚಳಿಕೆ.
ಗಿರ್: ಕಾಠೇವಾಡದ ಗಿರ್ ಕಾಡುಗಳಲ್ಲಿ ಅಲ್ಲಲ್ಲಿ ಈ ತಳಿ ಚೊಕ್ಕವಾಗಿ ಉಳಿದಿವೆ. ಕರುಗಳಲ್ಲಿ ಗಿರ್ ತಳಿಯ ಲಕ್ಷಣ ಚೆನ್ನಾಗಿ ಇಳಿದು ಬಂದಿರುವುದರಿಂದ ದೂರ ದೂರದ ಪ್ರದೇಶಗಳಲ್ಲೂ ಈ ಲಕ್ಷಣಗಳನ್ನು ಗುರುತಿಸಬಹುದು. ಈ ಆಕಳು ಸಾಧು; ಚೆನ್ನಾಗಿ ಹಾಲು ಕೊಡುತ್ತದೆ. ನಿದ್ದೆಗಣ್ಣು, ದೊಡ್ಡ ಹಣೆ, ಒಂದು ತೆರನಾಗಿ ಬಾಗಿದ ಕೊಂಬುಗಳು, ಉದ್ದನೆಯ ಜೋಲುಗಿವಿಗಳು, ಚಿವುಟಿದಂತಿರುವ ಕಿವಿ ತಿದಿಗಳು ಇದರ ಲಕ್ಷಣಗಳು. ಬಿಳಿ, ಕೆಂಪು, ಕಂದು ಮಚ್ಚೆಗಳ ಮೈ. ತೂಕವಾಗಿ ಬಲವಾಗಿರುವ ಎತ್ತು ಮಾಂಸದ ತಳಿ.

ಕಾಂಕ್ರೇಜ್: ಕಛ್ ಕೊಲ್ಲಿ, ಸಿಂಧು ಪ್ರಾಂತ್ಯ, ಅಹಮದಾಬಾದು ಈ ಚೊಕ್ಕ ತಳಿಯ ತವರು. ಈ ತಳಿಯನ್ನು ಅಮೇರಿಕಾದಲ್ಲಿ ಅಲ್ಲಿನವೊಂದಿಗೆ ಕೂಡಿಸಿ ಮಾಂಸದ ಒಳ್ಳೆಯ ತಳಿಗಳನ್ನು ತೆಗೆದಿರುವರು. ಈ ತಳಿಯ ಆಕಳು ಚೆನ್ನಾಗಿ ಹಾಲು ಕೊಡುತ್ತವೆ. ಒಂದು ಕರಾವಿನ ಕಾಲದಲ್ಲಿ 7,270 ಪೌಂಡು ಹಾಲು ಕೊಟ್ಟಿದ್ದುಂಟು. ಬಿಳಿ, ಬೂದು ಬಣ್ಣದವೂ, ಕಪ್ಪಿನ ಮೇಲಿನ ಬೂದು ಬಣ್ಣದವೂ ಹೇರಳ. ಗುಜರಾತು ಸರಕಾರದ ಈ ತಳಿಯ ದಾಖಲೆಯಿಡಲು ಅಸಕ್ತವಾಗಿದೆ. 
ಓಂಗೋಲ್: ಆಂಧ್ರಪ್ರದೇಶದ ನೆಲ್ಲೂರು, ಗುಂಟೂರುಗಳಲ್ಲಿ ಈ ತಳಿ ಹೆಚ್ಚು. ಪುಷ್ಟವಾಗಿ ಬೆಳೆದು ರೋಗಗಳನ್ನು ತಡೆವಂತಿರುತ್ತವೆ. ನಸು ಬಿಳಿ ಬಣ್ಣದ ಈ ತಳಿಯ ಎತ್ತುಗಳು ಕೆಲಸಕ್ಕೂ ಆಕಳು ಕರಾವಿಗೂ ಹೆಸರಾಗಿವೆ. ಒಂದು ಕರಾವಿನ ಕಾಲದಲ್ಲಿ 7,190 ಪೌಂಡು ಹಾಲೂ ಕೊಟ್ಟಿವೆ.

ಹರಿಯಾನ: ಹಳೆಯ ಪಂಜಾಬು, ದೆಹಲಿ ಪ್ರದೇಶಗಳ ಈ ತಳಿ ರಾಜಸ್ಥಾನ ಪ್ರಾಂತ್ಯದಲ್ಲಿ ಹೆಸರಾಗಿ ಬಳಕೆಯಲ್ಲಿದೆ. ಎತ್ತುಗಳು ದುಡಿಮೆಗೂ ಆಕಳು ಕರಾವಿಗೂ ಚೆನ್ನಾಗಿ ಬರುತ್ತವೆ. ಕರಾವಿನ ಕಾಲದಲ್ಲಿ 8,426 ಪೌಂಡುಗಳ ಹಾಲು ಕೊಟ್ಟುದುಂಟು. ಈ ತಳಿಗಳು ಬೆಳ್ಳಗೆ ಮಾಟವಾಗಿ ಬೆಳೆದು ನೋಡಲು ಅಂದವಾಗಿರುತ್ತವೆ. ಈ ತಳಿಯನ್ನು ಪಂಜಾಬು ಸರಕಾರ ಚೆನ್ನಾಗಿ ಬೆಳೆಸಿದೆ. 

ಸಿಂಧಿ: ಸಿಂಧೂ ಪ್ರಾಂತ್ಯದ ಗುಡ್ಡದ ಸೀಮೆಯ ತಳಿ. ಇದರ ಬಲು ಚೊಕ್ಕವಾದ ತಂಡಕ್ಕೆ ಲಾಸಬೆಲಾ ಎಂದಿದೆ. ಈ ತಳಿಯವು ಹೊಸ ಪರಿಸರಕ್ಕೆ ಚೆನ್ನಾಗಿ ಹೊಂದಿಕೊಂಡು ಕಷ್ಟ, ರೋಗಗಳನ್ನು ತಡೆದುಕೊಳ್ಳುತ್ತವೆ. ಅಚ್ಚಗೆಂಪಿನ ಕೆಂಪು ಈ ತಳಿಯ ಬಣ್ಣವಾದರೂ ಬೆರಕೆ ಹಳದಿಯಿಂದ ಕರಿ ಕಂದಿನ ತನಕ ಇರಬಹುದು. ಮೊಗದ ಮೇಲೆ ಬಿಳಿ ಗುರುತು. ಮೈಕಟ್ಟು ಬಿಗುವಾಗಿ ಸಮನಾಗಿರುತ್ತವೆ. ಎತ್ತುಗಳು ಸಣ್ಣವಾದರೂ ಬಲವಾದವು, ಯೂರೋಪಿನಲ್ಲಿ ಜರ್ಸಿ ತಳಿ ಇರುವಂತೆ, ಭಾರತದಲ್ಲಿ ಹಾಲಿನ ತಳಿಯೆಂದರೆ ಸಿಂಧಿಯೇ. ಕರಾವಿನ ಕಾಲದಲ್ಲಿ 12,000 ಪೌಂಡುಗಳಷ್ಟು ಹಾಲು ಕೊಟ್ಟಿರುವುದುಂಟು. ಹಾಲು ಜಿಡ್ಡೂ ಹೆಚ್ಚು. ಸಾಧುವಾಗಿ, ಸಾಕಲೂ ಸುಲಭ. ಈ ತಳಿ ಪರದೇಶಗಳಿಗೂ ಹೋಗಿದೆ.

ಸಹಿವಾಲ್: ಪಂಜಾಬಿನ ಮಾಂಟ್ಗೊಮರಿ ಜಿಲ್ಲೆ ಈ ತಳಿಯ ತವರು. ಮುಖ್ಯವಾಗಿ ಇದು ಹಾಲಿನ ತಳಿ. ಒಂದು ರಾಸು ಒಂದು ಕರಾವಿಗೆ 14,000 ಪೌಂಡುಗಳಷ್ಟು ಕೊಟ್ಟಿರುವುದು ಉಂಟು. ಸರಿಯಾಗಿ ಬೆಳೆಸಿದರೆ, ವಿಶಿಷ್ಟ ಗುಣಗಳಲ್ಲಿ ಯೂರೋಪಿನವಕ್ಕೂ ಭಾರತದವು ಕೀಳಲ್ಲವೆಂದು, ಇತ್ತೀಚಿನ ಈ ತಳಿ ಚೆನ್ನಾಗಿ ತೋರಿಸಿಕೊಟ್ಟಿದೆ. ಸಾಧಾರಣವಾಗಿ ಇದರ ಬಣ್ಣ ಕೆಂಪು; ಅಚ್ಚಗೆಂಪೂ, ಕಂದೂ ಇರಬಹುದು. ಈ ತಳಿಯ ದಾಖಲೆಗಳನ್ನು ಚೆನ್ನಾಗಿ ಇಟ್ಟಿರುವುದರಿಂದ ತಳಿಯ ಚೊಕ್ಕತೆ ಚೆನ್ನಾಗಿದೆ. 
                 
 (ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ